ನಜ್ರುಲ್ ಇಸ್ಲಾಂ, ಕಾಜಿ
1899-1976. ಇಪ್ಪತ್ತನೆಯ ಶತಮಾನದ ಪ್ರಸಿದ್ಧ ಬಂಗಾಳಿ ಕವಿ. ಹುಟ್ಟಿದ್ದು 1899ರ ಮೇ 24ರಂದು. ಬಂಗಾಳದ ಬದ್ರ್ವಾನ್ ಜಿಲ್ಲೆಗೆ ಸೇರಿದ ಚುರುಲಿಯಾ ಗ್ರಾಮದಲ್ಲಿ ಎಂಟನೆಯ ವರ್ಷಕ್ಕೇ ತಂದೆಯನ್ನು ಕಳೆದುಕೊಂಡು ಕಷ್ಟದಿಂದ ಜೀವನ ನಡೆಸಬೇಕಾಯಿತು. ಬ್ರೆಡ್ ಅಂಗಡಿಯಲ್ಲಿ ಕೆಲಸ ಮಾಡಿ, ನಾಟಕಗಳಿಗೆ ಹಾಡು ಬರೆಯುತ್ತ, ಮೊದಲನೆಯ ಮಹಾಯುದ್ಧದಲ್ಲಿ ಬಂಗಾಳಿ ರೆಜಿಮೆಂಟಿನ ಹವಾಲ್ದಾರರಾಗಿ ದುಡಿದರು. ಬಂಗಾಳಿಯ ಜೊತೆಗೆ ಉರ್ದು ಮತ್ತು ಪರ್ಷಿಯನ್ ಭಾಷೆಗಳ ಪರಿಚಯವಿದ್ದ ಇವರು ಇಪ್ಪತ್ತನೆಯ ವರ್ಷಕ್ಕೇ ಗಂಭೀರ ಬರವಣಿಗೆಗೆ ಕೈಹಾಕಿದರು ; ನವಯುಗ ಹಾಗೂ ಸೇವಕ್ ಪತ್ರಿಕೆಗಳಲ್ಲಿ ಕೆಲಕಾಲ ಕೆಲಸ ಮಾಡಿದರು. ಮನಃಪೂರ್ವಕವಾದ ಬರೆವಣಿಗೆಗೆ ಬೇಕಾದ ಸ್ವಾತಂತ್ರ್ಯವಿಲ್ಲವೆಂಬ ಕಾರಣದಿಂದ ಆ ಕೆಲಸ ಬಿಟ್ಟು ತಾವೇ ಮುಂದೆ ಧೂಮಕೇತು ಎಂಬ ವಾರಪತ್ರಿಕೆ ಹೊರಡಿಸಿದರು. 

ದೇಶದ ಸ್ವಾತಂತ್ರ್ಯ ಪ್ರತಿಪಾದನೆಗಾಗಿ ಮತ್ತು ಹಿಂದು-ಮುಸ್ಲಿಂ ಐಕ್ಯಕ್ಕಾಗಿ ಪರಿಣಾಮಕಾರಿಯಾಗಿ ಬರೆದ ಲೇಖಕರಲ್ಲಿ ಇವರು ಅತ್ಯಂತ ಪ್ರಸಿದ್ಧರು. ಆಂಗ್ಲರ ದಬ್ಬಾಳಿಕೆಯನ್ನು ಕೊನೆಗಾಣಿಸಬೇಕೆಂದು ಭಾರತದ ಜನತೆಗೆ ಕರೆ ನೀಡಿ ಇವರು ಬರೆಯುತ್ತಿದ್ದ ಆವೇಶಭರಿತವಾದ ಕವನಗಳು ಇಡಿಯ ಬಂಗಾಳವನ್ನು ಕೆರಳಿಸುವಷ್ಟು ಪರಿಣಾಮಕಾರಿಯಾಗಿರುತ್ತಿದ್ದುವು. ಜನತೆ ಇವರನ್ನು ಸುಪ್ತ ಜ್ವಾಲಾಮುಖಿ ಎಂದು ವರ್ಣಿಸಿತು. ಇಪ್ಪತ್ತರ ದಶಕದ ಮೊದಲಲ್ಲಿ ಬಿಜೋಲಿ ಎಂಬ ಪತ್ರಿಕೆಯಲ್ಲಿ ಪ್ರಕಟವಾದ ಇವರ ಬಿದ್ರೋಹಿ ಎಂಬ ಕ್ರಾಂತಿಕಾರಿ ಕಾವ್ಯ ಒಂದೇ ವಾರದಲ್ಲಿ ಮತ್ತೆ ಮತ್ತೆ ಮುದ್ರಣಗೊಂಡು 29,000 ಪ್ರತಿಗಳು ಮಾರಾಟವಾದುವು. ಸ್ವಾತಂತ್ರ್ಯವನ್ನು ಎತ್ತಿಹಿಡಿದ ಕಾರಣಕ್ಕಾಗಿ ಯುಗವಾಣಿ ಎಂಬ ಇವರ ಪ್ರಬಂಧಗಳ ಸಂಗ್ರಹವನ್ನು ಸರ್ಕಾರ ಬಹಿಷ್ಕರಿಸಿತು. 1922ರಲ್ಲಿ ಹೊರಬಂದ ಅಗ್ನಿಚೀಣಾ ಕಾವ್ಯಸಂಗ್ರಹ ಗೀತೆಗಳಿಂದ ಕೂಡಿದ್ದು ಈ ತನಕ ಸುಮಾರು ಇಪ್ಪತ್ತೈದು ಸಲ ಮುದ್ರಣಗೊಂಡಿದೆ. ಅದೇ ವರ್ಷ ಇವರು ತಮ್ಮ ಧೂಮಕೇತು ಪತ್ರಿಕೆಯಲ್ಲಿ ಪ್ರಕಟಿಸಿದ ಆನಂದಮಯೀರ್ ಆಗಮನೇ ಕವನ ಬ್ರಿಟಿಷ್ ಸರ್ಕಾರದ ಕೋಪ ಕೆರಳಿಸಿತು. ಜಲಿಯನ್‍ವಾಲಾಬಾಗಿನ ಹತ್ಯಾಕಾಂಡವನ್ನು ಇವರು ಉಗ್ರವಾಗಿ ಖಂಡಿಸಿದ್ದಂತೂ ಅದಕ್ಕೆ ಅಸಹ್ಯವೆನಿಸಿತು. ಇದೆಲ್ಲದರ ಫಲವಾಗಿ ಸರ್ಕಾರ ಇವರ ಮೇಲೆ ಮೊಕದ್ದಮೆ ಹೂಡಿತು. ನ್ಯಾಯಾಲಯದಲ್ಲಿಯೂ ನಜರುಲ್ ತಮ್ಮ ನಿಲುವನ್ನೇ ಸಮರ್ಥಿಸಿದರು. ಬ್ರಿಟಿಷರ ಅಕೃತ್ಯಗಳನ್ನು ಖಂಡಿಸಿದರು. ನಾನು ಕವಿ. ಸತ್ಯದ ವಾಹಕ. ಬಿದಿರಿನ ಕೊಳಲಿಗೆ ಸಮಾನವಾದ ಈ ದೇಹವನ್ನು ನೀವು ಬಂಧಿಸಬಹುದು. ಕೊಲ್ಲಬಹುದು. ಆದರೆ ಅದರಿಂದ ಹೊರಡುವ ಗಾಯನ ನಿರಂತರವಾದದ್ದು. ಅದು ಒಂದಿಲ್ಲೊಂದು ವಾಹಕದ ಮೂಲಕ ಪ್ರಕಟವಾಗುತ್ತಲೇ ಹೋಗುತ್ತದೆ. ಅದಕ್ಕೆ ಸಾವಿಲ್ಲ-ಎಂದು ಘೋಷಿಸಿದರು. ನ್ಯಾಯಾಲಯ ಇವರಿಗೆ ಒಂದು ವರ್ಷದ ಕಾರಾಗೃಹ ವಿಧಿಸಿತು.

ಕಾರಾಗೃಹದಲ್ಲಿ ಅಧಿಕಾರಿಗಳು ತಮ್ಮೊಡನೆ ಅಮಾನುಷವಾಗಿ ನಡೆದುಕೊಂಡದ್ದನ್ನು ನಜರುಲ್ ತೀವ್ರವಾಗಿ ಪ್ರತಿಭಟಿಸಿ ಉಪವಾಸ ಸತ್ಯಾಗ್ರಹ ಆರಂಭಿಸಿದರು. ಉಪವಾಸ ನಲವತ್ತೊಂದು ದಿನಗಳವರೆಗೆ ನಡೆದು ಬಂಗಾಳದ ಜನತೆ ಕಳವಳಕ್ಕೆ ಈಡಾಯಿತು. ಉಪವಾಸ ನಿಲ್ಲಿಸುವಂತೆ ಸಾಮಾನ್ಯ ಜನರಿಂದ ಹಿಡಿದು ರವೀಂದ್ರನಾಥ ಠಾಕೂರರಂಥ ಗಣ್ಯರವರೆಗೆ ಎಲ್ಲರೂ ಇವರನ್ನು ಪ್ರಾರ್ಥಿಸಿದರು. ತನ್ನ ಕ್ರಮಗಳಿಂದ ಜನರ ಮೇಲಾಗುವ ಪರಿಣಾಮಕ್ಕೆ ಹೆದರಿ ಸರ್ಕಾರ ನಜರುಲ್‍ರನ್ನು ಬೇರೊಂದು ಪ್ರದೇಶದ ಜೈಲಿಗೆ ವರ್ಗಾಯಿಸಿ ವಿಶಿಷ್ಟ ಸೌಕರ್ಯ ಒದಗಿಸಿತು.

ಹೊರಬಂದಮೇಲೂ ನಜರುಲ್ ಅವರ ಬರೆವಣಿಗೆ ಮೊದಲಿನ ನಿಲವಿನಲ್ಲೇ ಇನ್ನಷ್ಟು ಭರದಿಂದ ಸಾಗಿತು. ಸರ್ಕಾರ ಸಹ ಒಂದಾದಮೇಲೊಂದರಂತೆ ಇವರ ಬರಹಗಳನ್ನು ಬಹಿಷ್ಕರಿಸುತ್ತಲೇ ಹೋಯಿತು. ಭಂಗಾರ್‍ಗಾನ್, ಪೂಬೇರ್ ಹಾವ್ಯಾ, ಬುಲ್‍ಬುಲ್ ಮೊದಲಾದ ಭಾವಗೀತೆಗಳ ಸಂಗ್ರಹಗಳಲ್ಲಿನ ಕವನಗಳು ಇವರ ಪ್ರಸಿದ್ಧ ಕೃತಿಗಳಾಗಿದ್ದು ಬಂಗಾಳದ ಮೂಲೆಮೂಲೆಗಳನ್ನೂ ತಲುಪಿದವು. ಕೆಲವು ಕಥೆಕಾದಂಬರಿಗಳನ್ನೂ ರಚಿಸಿದ ಇವರು ಬಂಗಾಳದಲ್ಲಿ ಕ್ರಾಂತಿಯ ಹರಿಕಾರರಾಗಿ ಹೋದರು.

ನಜರುಲ್ ತಮ್ಮ ಜೀವನ ಕಾವ್ಯಗಳೆರಡರಲ್ಲಿಯೂ ಮುಖ್ಯವಾಗಿ ಪ್ರತಿಪಾದಿಸಿದ ತತ್ತ್ವಗಳು ಎರಡು : ದೇಶದ ಸ್ವಾತಂತ್ರ್ಯ ಮತ್ತು ಹಿಂದು-ಮುಸ್ಲಿಂ ಐಕ್ಯ. ಹಿಂದುಗಳೂ ಮುಸ್ಲಿಮರೂ ಅಣ್ಣತಮ್ಮಂದಿರಂತೆ ಬಾಳಿದಲ್ಲದೆ ದೇಶಕ್ಕೆ ಗತ್ಯಂತರವೇ ಇಲ್ಲವೆಂದು ಇವರು ದೃಢವಾಗಿ ನಂಬಿದ್ದರು. ಹಾಗೆ ಅವರು ಬಾಳಲು ನಿರಾಕರಿಸಿದ ಪಕ್ಷಕ್ಕೆ ಪ್ರಕೃತಿಯೇ ಅವರನ್ನು ಆ ಐಕ್ಯದತ್ತ ತಳ್ಳುತ್ತದೆ ಎಂದು ಇವರು ಹೇಳುತ್ತಿದ್ದರು. ಹಿಂದು-ಮುಸ್ಲಿಮರು ಅಣ್ಣತಮ್ಮಂದಿರು. ಭಾರತಾಂಬೆಯ ಎರಡು ಕಣ್ಣುಗಳು. ಒಂದೇ ತೋಟದ ಎರಡು ವೃಕ್ಷಗಳು. ಒಂದು ದೇವದಾರು, ಇನ್ನೊಂದು ಕದಂಬ-ಅವರ ಗೀತೆಯೊಂದರಲ್ಲಿ ಬರುವ ಮಾತು ಇದು. 

ನಜರುಲ್ ತಮ್ಮ ನಿಲವನ್ನು ಬಾಳಿ ತೋರಿಸಿದರು. ಇವರು ವಿವಾಹವಾದದ್ದು ಪ್ರಮೀಳಾ ಸೇನಗುಪ್ತ ಎಂಬ ಹಿಂದೂ ಕನ್ಯೆಯನ್ನು. ನಜರುಲ್‍ನ ಧರ್ಮಸಹಿಷ್ಣುತೆ ಎಷ್ಟು ಹಿರಿಯ ಮಟ್ಟದ್ದಾಗಿತ್ತೆಂದರೆ ತಮ್ಮ ಪತ್ನಿ ಪ್ರಮೀಳಾ ಧರ್ಮಾಂತರಗೊಳ್ಳುವುದನ್ನು ಸಹ ಅವರು ಇಷ್ಟಪಡಲಿಲ್ಲ. ಮುಸಲ್ಮಾನರಾಗಿದ್ದೂ ಇವರು ಭಗವದ್ಗೀತೆ ಉಪನಿಷತ್ತುಗಳನ್ನು ಆಳವಾಗಿ ಅಭ್ಯಾಸಮಾಡಿದ್ದರು; ಮಹಾಕಾಳಿಯ ಆರಾಧಕರಾಗಿದ್ದರು. ಶ್ರೀ ರಾಮಕೃಷ್ಣ ಪರಮಹಂಸರ ಧರ್ಮದ ದೃಷ್ಟಿಯನ್ನು ಮನಸಾ ಒಪ್ಪಿ ಅನುಸರಿಸಿದ್ದರು. ಸರ್ವ ಸಮಾನತೆಯೊಂದೇ ನಾನು ಅನುಸರಿಸುವ ಧರ್ಮ. ಈ ಧರ್ಮದಲ್ಲಿ ಹಿಂದು-ಮುಸ್ಲಿಮರೆಲ್ಲ ಸೇರಿದ್ದಾರೆ. ಇದರಲ್ಲಿ ಜನರನ್ನು ಪ್ರತ್ಯೇಕಿಸುವ ಗೋಡೆಗಳಿಲ್ಲ. ಎಲ್ಲ ಬಗೆಗಳನ್ನು ಒಳಗೊಂಡ ವೈವಿಧ್ಯ ; ಆ ವೈವಿಧ್ಯದ ಅಂತರಂಗದಲ್ಲಿ ಕಾಣುವ ಸಾಮರಸ್ಯ-ಇವೇ ಈ ಧರ್ಮದ ವಿಶೇಷ. ನೀನು ಯಾರು ? ಜೈನನೆ, ಬೌದ್ಧನೆ, ಆಸ್ತಿಕನೆ, ನಾಸ್ತಿಕನೆ, ಪಾರಸಿಯೆ, ಕಾನ್‍ಫೂಷಸ್ ಅನುಯಾಯಿಯೆ ? ಯಾರೇ ಆಗಿರು. ನನ್ನ ಧರ್ಮದಲ್ಲಿ ನೀವೆಲ್ಲ ಸಮಾನರು ಎಂದು ತಮ್ಮ ಗೀತೆಯೊಂದರಲ್ಲಿ ಹೇಳುತ್ತಾರೆ. ಮತದ ಹೆಸರು ಹೇಳಿ ಮಾಡಿದ ಧರ್ಮದ ವಿಭಜನೆಯನ್ನು ನಜರುಲ್ ಖಂಡತುಂಡ ವಿರೋಧಿಸಿದ್ದರು. 

ನಲವತ್ತರ ದಶಕದ ಮೊದಲಲ್ಲಿ ಕಲ್ಕತ್ತ ಆಕಾಶವಾಣಿ ಕೇಂದ್ರದಲ್ಲಿ ಭಾಷಣ ಮಾಡುತ್ತಿದ್ದಾಗ ಹಠಾತ್ತಾಗಿ ನಜರುಲ್ ಪಕ್ಷಾಘಾತಕ್ಕೆ ಒಳಗಾದರು. ಆಗ ಇವರು ಕಳೆದುಕೊಂಡ ದನಿ ಮತ್ತೆ ಮರಳಲಿಲ್ಲ. ಪಾಶ್ರ್ವವಾಯುಪೀಡಿತರಾಗಿಯೇ ಇವರು ಮೂವತ್ತಕ್ಕೂ ಹೆಚ್ಚು ವರ್ಷ ಕಳೆದರು. ತಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದಾಗ ಬಾಂಗ್ಲಾದೇಶದ ಮುಕ್ತಿವಾಹಿನಿಯ ಯೋಧರು ಹಾಡಿದುದು ನಜರುಲ್‍ರ ಕ್ರಾಂತಿಗೀತೆಗಳನ್ನೇ. ಬಾಂಗ್ಲಾದೇಶದ ನಿರ್ಮಾಣ ಇವರು ಸಾರಿದ ಹಿಂದು-ಮುಸ್ಲಿಂ ಐಕ್ಯತತ್ತ್ವವನ್ನು ಪ್ರತಿಪಾದಿಸಿ ತೋರಿಸಿತು.							(ಎನ್.ಎಸ್.ಎಲ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ